ಕಪ್ಪೆ : ಕಶೇರುಕಗಳ ಗುಂಪಿನ ದ್ವಿಚರವರ್ಗದ (ಆಂಫಿಬಿಯ) ಎನ್ಯೂರ ಗಣಕ್ಕೆ ಸೇರಿದ ಪ್ರಾಣಿ. ಸಾಮಾನ್ಯವಾಗಿ ಬಾಲವಿಲ್ಲದ ದ್ವಿಚರಿಗಳಿಗೆಲ್ಲ ಈ ಹೆಸರು ಅನ್ವಯವಾಗುತ್ತದೆ. ಇವುಗಳ ವರ್ಗದ ಹೆಸರೇ ಸೂಚಿಸುವಂತೆ ಕಪ್ಪೆಗಳು ನೀರಿನಲ್ಲೂ ನೆಲದ ಮೇಲೂ ಜೀವಿಸಬಲ್ಲುವು. ಇಂಥ ಜೀವನಕ್ಕೆ ತಕ್ಕಂತೆ ದೇಹದ ಮಾರ್ಪಾಟುಗಳನ್ನೂ ಹೊಂದಿವೆ. ಕಪ್ಪೆಗಳಲ್ಲಿ ಹಲವಾರು ವಿಧಗಳಿವೆ. ಇವುಗಳಲ್ಲಿ ನೀರಿನಲ್ಲಿ ವಾಸಿಸುವ ಕಪ್ಪೆ (ಫ್ರಾಗ್), ನೆಲಗಪ್ಪೆ (ಟೋಡ್) ಮತ್ತು ಹಾರುಗಪ್ಪೆ (ಫ್ಲೈಯಿಂಗ್ ಫ್ರಾಗ್) ಮುಖ್ಯವಾದುವು. ಸಾಧಾರಣವಾಗಿ ನೀರಿನಲ್ಲಿ ವಾಸಿಸುವ ಕಪ್ಪೆಗಳು ತಮ್ಮ ಬದುಕನ್ನು ಸಂಪುರ್ಣವಾಗಿ ನೀರಿನಲ್ಲೇ ಸಾಗಿಸುತ್ತವೆ. ಇವುಗಳ ಚರ್ಮ ನುಣುಪಾಗಿದ್ದು ಲೋಳೆಯಿಂದ ಆವೃತ ವಾಗಿರುತ್ತದೆ. ಅಲ್ಲದೆ ಇವುಗಳ ಭುಜಕಟ್ಟಿನ (ಶೋಲ್ಡರ್ ಗರ್ಡಲ್) ಎರಡು ಭಾಗಗಳು ಕೂಡಿಕೊಂಡು ಒಂದು ದೃಢವಾದ ಪಟ್ಟೆಯಾಗಿವೆ. ನೆಲಗಪ್ಪೆಗಳು ನೀರಿನಲ್ಲೇ ಜನ್ಮ ತಾಳುವುದಾದರೂ ಪ್ರೌಢಾವಸ್ಥೆಯನ್ನು ನೆಲದ ಮೇಲೆ ಕಳೆಯುತ್ತವೆ. ಮೊಟ್ಟೆಯಿಡಲು ಮಾತ್ರ ಅವು ನೀರಿಗೆ ಹೋಗುತ್ತವೆ. ಇವುಗಳ ಚರ್ಮ ಒರಟು ಹಾಗೂ ಒಣಗಿರುತ್ತದೆಯಲ್ಲದೆ ಅದರ ಮೇಲೆಲ್ಲ ಬುಗುಟುಗಳಿವೆ. ಇವುಗಳಲ್ಲಿ ಭುಜಕಟ್ಟಿನ ಎರಡು ಭಾಗಗಳು ಕೂಡಿಕೊಂಡಿರದೆ ಒಂದರ ಮೇಲೊಂದು ಚಾಚಿಕೊಂಡಿವೆ. ಹಾರುಗಪ್ಪೆ ನೀರಿನಲ್ಲಿ ವಾಸಿಸುವ ಕಪ್ಪೆಯಂತೆಯೇ ಇದೆ. ಆದರೆ ಅದಕ್ಕಿಂತ ಗಾತ್ರದಲ್ಲಿ ಚಿಕ್ಕದು. ಕೈಕಾಲುಗಳ ಬೆರಳುಗಳ ಮಧ್ಯೆ ರೆಕ್ಕೆಯಂತೆ ಹರಡಿರುವ ಜಾಲಪಾದವಿದೆ. ಮರದಿಂದ ಮರಕ್ಕೆ ಹಾರುವಾಗ ಈ ಜಾಲಪಾದವನ್ನು ಪ್ಯಾರಾಚೂಟಿನಂತೆ ಬಳಸಿಕೊಳ್ಳಬಲ್ಲುದು.

ಕಪ್ಪೆ ಸಾಮಾನ್ಯವಾಗಿ ಕೆರೆ, ಕುಂಟೆ, ಸಣ್ಣತೊರೆಗಳು ಮತ್ತಿತರ ತೇವಪುರಿತ ಸ್ಥಳಗಳಲ್ಲಿ ವಾಸಿಸುತ್ತವೆ. ಸಣ್ಣಪುಟ್ಟ ಹುಳುಗಳು, ಬಸವನ ಹುಳುಗಳು ಮತ್ತು ಕೀಟಗಳು ಇದರ ಪ್ರಧಾನ ಆಹಾರ. ಹೀಗೆ ಇಂಥ ಪ್ರಾಣಿಗಳನ್ನು ತಿಂದು ನಾಶಪಡಿಸುವುದರಿಂದ ರೈತನಿಗೆ ಬಹಳ ಸಹಾಯಕವಾಗಿದೆ.

ಕಪ್ಪೆಯ ದೇಹವನ್ನು ತಲೆ, ಮುಂಡ ಮತ್ತು ಕೈಕಾಲುಗಳೆಂದು ವಿಭಾಗಿಸಬಹುದು. ತಲೆ ಚಪ್ಪಟೆಯಾಗಿಯೂ ತ್ರಿಕೋಣಾಕಾರವಾಗಿಯೂ ಇದೆ. ಮೂತಿಯ ತುದಿಯಲ್ಲಿ ಒಂದು ಅಗಲವಾದ ಬಾಯಿಯೂ ಕೊಂಚ ಮೇಲ್ಭಾಗದಲ್ಲಿ ಒಂದು ಜೊತೆ ಹೊರನಾಸಿಕ ರಂಧ್ರಗಳೂ ಇವೆ. ಸ್ವಲ್ಪ ಹಿಂದಕ್ಕೆ ಎರಡು ದೊಡ್ಡ ಉಬ್ಬಿಕೊಂಡ ಕಣ್ಣುಗಳಿವೆ. ಕಣ್ಣುಗಳಿಗೆ ಮನುಷ್ಯರಲ್ಲಿರುವಂತೆಯೇ ಎರಡು ಸಾಮಾನ್ಯ ರೆಪ್ಪೆಗಳೂ ಪಾರದರ್ಶಕವಾದ ನಿಮೇಷಕ ಪಟಲ (ನಿಕ್ಟಿಟೇಟಿಂಗ್ ಮೆಂಬ್ರೇನ್) ಎಂಬ ಮೂರನೆಯ ರೆಪ್ಪೆಯೂ ಇವೆ. ಕಣ್ಣುಗಳ ಹಿಂಬದಿಯಲ್ಲಿ ದುಂಡಾದ ಕಿವಿಯ ತಮಟೆಗಳಿವೆ. ತಲೆಗೂ ಮುಂಡಕ್ಕೂ ನಡುವೆ ಸ್ಪಷ್ಟವಾದ ಕುತ್ತಿಗೆಯಿಲ್ಲ. ಮುಂಡಭಾಗ ಹೆಚ್ಚುಕಡಿಮೆ ಕೊಳವೆಯಾಕಾರವಾಗಿದ್ದು ಎರಡು ಜೊತೆ ಕಾಲುಗಳನ್ನು ಹೊಂದಿದೆ. ಮುಂಡದ ಹಿಂತುದಿಯಲ್ಲಿ ಹಿಂಗಾಲುಗಳ ನಡುವೆ ಮಲ, ಮೂತ್ರ ಹಾಗೂ ಜನನೇಂದ್ರಿಯ ದ್ವಾರವಾದ ಕ್ಲೋಯಕ ಎಂಬ ರಂಧ್ರವಿದೆ. ಮುಂಗಾಲಿನಲ್ಲಿ ನಾಲ್ಕು ಬೆರಳುಗಳೂ ಹಿಂಗಾಲಿನಲ್ಲಿ ಐದು ಬೆರಳುಗಳೂ ಇವೆ. ಹಿಂಗಾಲುಗಳು ಮುಂಗಾಲುಗಳಿಗಿಂತ ಬಹಳ ಉದ್ದ. ಎಲ್ಲ ಬೆರಳುಗಳ ನಡುವೆ ಜಾಲಪಾದವಿದೆ. ಇದು ಈಜುವುದಕ್ಕೆ ಸಹಕಾರಿ. ಗಂಡು ಕಪ್ಪೆಯಲ್ಲಿ ದವಡೆಗಳ ಬಳಿ ಎರಡೂ ಪಕ್ಕಗಳಲ್ಲಿ ಬಾಯ ಅಂಗಳದೊಳಕ್ಕೆ ತೆರೆಯುವಂಥ ಎರಡು ಧ್ವನಿಚೀಲಗಳಿವೆ. ಕಪ್ಪೆಯ ವಿಚಿತ್ರವಾದ ಹಾಗೂ ವಿಶಿಷ್ಟವಾದ ವಟಗುಟ್ಟುವ ಶಬ್ದವನ್ನು ವರ್ಧಿಸಲು ಇವು ಸಹಕಾರಿಯಾಗಿವೆ.

ಕಶೇರುಕಗಳ ರಚನೆಯ ಅಭ್ಯಾಸಕ್ಕೆ ಇದು ಸರಳವಾದ ಮತ್ತು ಮೂಲರಚನೆಯನ್ನು ತೋರುವ ಮಾದರಿಯಾದುದರಿಂದ ಕಶೇರುಕಗಳ ಅಭ್ಯಾಸವನ್ನು ಕಪ್ಪೆಯಿಂದಲೇ ಆರಂಭಿಸುತ್ತಾರೆ.

ಮನುಷ್ಯದೇಹದಲ್ಲಿರುವಂತೆಯೇ ಕಪ್ಪೆಯಲ್ಲಿಯೂ ಚೆನ್ನಾಗಿ ರೂಪುಗೊಂಡ ಅಸ್ಥಿಪಂಜರವಿದೆ. ಇದನ್ನು ಮುಖ್ಯವಾಗಿ ಅಕ್ಷೀಯ ಅಸ್ಥಿಪಂಜರ, ಅನುಬಂಧಿ ಅಸ್ಥಿಪಂಜರ ಮತ್ತು ಅವಯವಭಾಗ ಎಂದು ವಿಭಾಗಿಸಬಹುದು. ಅಕ್ಷೀಯ ಭಾಗದಲ್ಲಿ ಒಂಬತ್ತು ಕಶೇರುಖಂಡವನ್ನೊಳಗೊಂಡ ಬೆನ್ನುಮೂಳೆಯೂ ಭಾಗಶಃ ಮೂಳೆ ಮತ್ತು ಭಾಗಶಃ ಮೃದ್ವಸ್ಥಿಯಿಂದಾದ ತಲೆಬುರುಡೆಯೂ ಇವೆ. ಬೆನ್ನುಮೂಳೆಯ ಹಿಂತುದಿಯಲ್ಲಿ ಅದರಷ್ಟೇ, ಉದ್ದವಾದ ಯೂರೋಸ್ಟೈಲ್ ಎಂಬ ಕಡ್ಡಿಯಂಥ ಭಾಗವಿದೆ. ತಲೆಬುರುಡೆಯಲ್ಲಿ ಹಲವಾರು ಎಲುಬುಗಳಿಂದಾದ ಮಿದುಳುಪೆಟ್ಟಿಗೆ, ಮೇಲಿನ ಹಾಗೂ ಕೆಳಗಿನ ದವಡೆಗಳು ಮತ್ತು ಹೈಯಾಯಿಡ್ ಉಪಕರಣವೆಂಬ ವಿಶೇಷ ರೀತಿಯ ಭಾಗವೂ ಇವೆ. ಈ ಉಪಕರಣ ಕಪ್ಪೆಮರಿಯಲ್ಲಿ ಕಿವಿರುಗಳಿಗೆ ಆಧಾರವಾಗಿರುತ್ತದೆ. ಅನುಬಂಧಿ ಅಸ್ಥಿಪಂಜರದಲ್ಲಿ ಹಲವಾರು ಎಲುಬುಗಳಿಂದಾದ ಭುಜಾಸ್ಥಿ ವಲಯವೂ v-ಆಕಾರದ ಕಟ್ಯಸ್ಥಿವಲಯವೂ ಇವೆ. ಭುಜಾಸ್ಥಿವಲಯಕ್ಕೆ ಮುಂಗಾಲುಗಳ ಆಧಾರಮೂಳೆಗಳೂ ಕಟ್ಯಸ್ಥಿವಲಯಕ್ಕೆ ಹಿಂಗಾಲುಗಳ ಮೂಳೆಗಳೂ ಕೂಡಿಕೊಂಡಿವೆ. ಕಾಲುಗಳ ಮೂಳೆಗಳು ಹೆಚ್ಚು ಕಡಿಮೆ ಮನುಷ್ಯರಲ್ಲಿರುವಂತೆಯೇ ಇವೆ.

ಕಪ್ಪೆಯ ಜೀರ್ಣಾಂಗಗಳು ಮನುಷ್ಯರಲ್ಲಿರುವಂತೆಯೇ ಇವೆ. ಬಹಳ ದೊಡ್ಡ ಬಾಯಿ, ವಿಚಿತ್ರವಾದ ನಾಲಗೆ ಮತ್ತು ದೊಡ್ಡ ದವಡೆಗಳು-ಇವು ಕಪ್ಪೆಯ ವಿಶೇಷ ಲಕ್ಷಣಗಳು. ನಾಲಗೆ ಬಾಯಂಗಳದ ಮುಂಭಾಗದಲ್ಲಿ ಅಂಟಿಕೊಂಡು ಹಿಂದಕ್ಕೆ ಮಡಿಚಿಕೊಂಡಿದೆ. ಈ ನಾಲಗೆಯನ್ನು ಸಾಕಷ್ಟು ದೂರ ಚಾಚಿ, ಹಾರಾಡುವ ಕೀಟಗಳನ್ನು ಅರೆಕ್ಷಣದಲ್ಲಿ ಹಿಡಿದು ಬಾಯಿಗೆ ಹಾಕಿಕೊಳ್ಳಬಲ್ಲುದು. ನಾಲಗೆಯ ತುದಿ ಅಂಟಾಗಿರು ವುದರಿಂದ ಕೀಟಗಳನ್ನು ಹಿಡಿಯುವುದು ಸುಲಭ. ದವಡೆಗಳಲ್ಲಿ ಹಲ್ಲುಗಳಿಲ್ಲ, ಆದ್ದರಿಂದ ತಿಂದ ಆಹಾರವನ್ನು ಅಗಿಯದೆ ಹಾಗೆಯೇ ಗಂಟಲಿನ ಮೂಲಕ ಜಠರಕ್ಕೆ ಸಾಗಿಸುತ್ತದೆ. ಅಲ್ಲಿಂದ ಆಹಾರ ಸಣ್ಣಕರುಳಿಗೂ ಅನಂತರ ದೊಡ್ಡ ಕರುಳಿಗೂ ಸಾಗುತ್ತದೆ. ಪಚನಕ್ರಿಯೆಯಲ್ಲಿ ಸಹಾಯಕವಾಗಲು ಎರಡು ಹಾಲೆಗಳಿಂದಾದ ಯಕೃತ್ತೂ ಹಲವಾರು ಹಾಲೆಗಳುಳ್ಳ ಮೇದೋಜೀರಕವೂ ಇವೆ. ಎರಡರಿಂದ ಹೊರಡುವ ನಾಳಗಳು ಕೂಡಿಕೊಂಡು ದೊಡ್ಡ ಕರುಳಿನೊಳಕ್ಕೆ ತೆರೆಯುತ್ತವೆ. ಕರುಳಿನಿಂದ ಗುದನಾಳ ಹೊರಟು ಕ್ಲೋಯಕ ರಂಧ್ರದೊಡನೆ ಸಂಬಂಧ ಕಲ್ಪಿಸುತ್ತದೆ. ಪಚನಕ್ರಿಯೆ ಮನುಷ್ಯದೇಹದಲ್ಲಿ ನಡೆದಂತೆಯೇ ನಡೆಯುತ್ತದೆ.

ಕಪ್ಪೆಯಲ್ಲಿ ಉಸಿರಾಟ ಬಹುಪಾಲು ಶ್ವಾಸಕೋಶಗಳಿಂದಲೇ ನಡೆಯುತ್ತದೆ. ಶ್ವಾಸಾಂಗದಲ್ಲಿ ಬಾಯಂಗಳದಲ್ಲಿ ತೆರೆಯುವಂಥ ಗ್ಲಾಟಿಸ್ ಭಾಗವೂ ಲ್ಯಾರಿಂಗೊ-ಟ್ರೇಕಿಯಲ್ ಅವಕಾಶವೂ ಒಂದು ಜೊತೆ ಶ್ವಾಸಕೋಶಗಳೂ ಇವೆ. ಹೊರನಾಸಿಕ ರಂಧ್ರದಿಂದ ಬಾಯ ಅಂಗಳದೊಳಕ್ಕೆ ಗಾಳಿ ಬರುತ್ತದೆ. ಆಗ ಬಾಯಿ ಮುಚ್ಚಿಕೊಂಡು ಆ ಗಾಳಿ ಲ್ಯಾರಿಂಗೊ-ಟ್ರೇಕಿಯಲ್ ಕೊಳವೆಯ ಮೂಲಕ ಶ್ವಾಸಕೋಶದೊಳಕ್ಕೆ ಹೋಗುತ್ತದೆ. ಶ್ವಾಸಕೋಶದಲ್ಲಿ ಮನುಷ್ಯರಲ್ಲಿರುವಂತೆ ಅನೇಕ ಸೂಕ್ಷ್ಮ ಗಾಳಿಚೀಲಗಳಿದ್ದು ಅವು ಸೂಕ್ಷ್ಮ ರಕ್ತನಾಳಗಳಿಗೆ ಆಮ್ಲಜನಕವನ್ನು ಕೊಡುತ್ತವೆ. ರಕ್ತನಾಳಗಳಿಂದ ಇಂಗಾಲಾಮ್ಲ ಹೊರಬಿದ್ದು ಅಶುದ್ಧ ಗಾಳಿಯಾಗಿ ಬಂದ ದಾರಿಯಲ್ಲೆ ಹಿಂದಕ್ಕೆ ಬರುತ್ತದೆ. ಕಪ್ಪೆಯ ಚರ್ಮಕ್ಕೂ ಉಸಿರಾಟದ ಶಕ್ತಿಯಿದೆ. ಚರ್ಮದ ಕೆಳಗೆ ಅನೇಕ ಸೂಕ್ಷ್ಮ ರಕ್ತನಾಳಗಳಿದ್ದು ಅವು ನೇರವಾಗಿ ಹೊರಗಿನ ವಾತಾವರಣದಿಂದ ಆಮ್ಲಜನಕವನ್ನು ಹೀರಿಕೊಂಡು ಇಂಗಾಲಾಮ್ಲವನ್ನು ಬಿಟ್ಟುಕೊಡಬಲ್ಲುವು. ಇದರಿಂದಾಗಿ ಕಪ್ಪೆ ನೀರಿನಲ್ಲಿ ಮುಳುಗಿದ್ದಾಗಲೂ ಚರ್ಮದ ಮೂಲಕ ಉಸಿರಾಡಬಲ್ಲುದು. ಕಪ್ಪೆಮರಿಗಳಲ್ಲಿ ಉಸಿರಾಟ ಕಿವಿರುಗಳ ಮೂಲಕ ನಡೆಯುತ್ತದೆ.

ಕಪ್ಪೆಯಲ್ಲಿ ರಕ್ತಪರಿಚಲನೆಗೆ ಸಂಬಂಧಿಸಿದಂತೆ ಹೃದಯ, ಅಪಧಮನಿ ಸಮೂಹ ಮತ್ತು ಅಭಿಧಮನಿ ಸಮೂಹ ಇದೆ. ರಕ್ತಪರಿಚಲನಾಕ್ರಮ ಮನುಷ್ಯರಲ್ಲಿರುವಂತೆ ಇದ್ದರೂ ಹಲವಾರು ಮುಖ್ಯ ವ್ಯತ್ಯಾಸಗಳನ್ನು ಇಲ್ಲಿ ಕಾಣಬಹುದು. ಕಪ್ಪೆಯ ಹೃದಯದಲ್ಲಿ ಮೇಲ್ಭಾಗದಲ್ಲಿ ಎರಡು ಕೋಣೆಗಳೂ (ಆರಿಕಲ್ಸ್‌) ಕೆಳಭಾಗದಲ್ಲಿ ಒಂದೇ ಕೋಣೆ (ವೆಂಟ್ರಿಕಲ್)ಇವೆ. ದೇಹದ ಇತರ ಭಾಗಗಳಿಂದ ಹರಿದು ಬರುವ ಅಶುದ್ಧ ರಕ್ತ ಅಭಿಧಮನಿಗಳ ಮೂಲಕ ಹೃದಯದ ಮೇಲಿನ ಬಲ ಕೋಣೆಯನ್ನು ಸೇರುತ್ತದೆ. ಮೇಲಿನ ಎಡಕೋಣೆಯಲ್ಲಿ ಶ್ವಾಸಕೋಶಗಳಿಂದ ಬರುವ ಶುದ್ಧರಕ್ತ ಸೇರುತ್ತದೆ. ಎರಡು ಬಗೆಯ ರಕ್ತಗಳೂ ಮೇಲಿನ ಎರಡು ಕೋಣೆಗಳಿಂದ ಒಂದೇ ಸಾಮಾನ್ಯದ್ವಾರದ ಮೂಲಕ ಕೆಳಕೋಣೆಯನ್ನು ಸೇರುತ್ತದೆ. ಹೀಗೆ ಈ ರಕ್ತ ಹೊರಡುತ್ತಿದ್ದಂತೆಯೇ ಎಡಕೋಣೆಯಿಂದ ಉಳಿದ ಶುದ್ಧರಕ್ತ ಮತ್ತೆ ಕೆಳಕೋಣೆಗೆ ಬರುತ್ತದೆ. ಈ ರಕ್ತ ಪುನಃ ಕೆಳಕೋಣೆಯ ಸಂಕುಚನದಿಂದ ಮಿದುಳುಭಾಗಕ್ಕೆ ಸಾಗುತ್ತದೆ. ಹೀಗೆ ಮಿದುಳುಭಾಗಕ್ಕೆ ಮಾತ್ರ ಸಂಪುರ್ಣ ಶುದ್ಧರಕ್ತ ಪುರೈಕೆಯಾಗುತ್ತದೆ. ಈ ರೀತಿಯ ರಕ್ತಪರಿಚಲನೆ ಕಪ್ಪೆಗೆ ವಿಶಿಷ್ಟವಾದುದು.

ಕಪ್ಪೆಯ ನರಸಮೂಹದಲ್ಲಿ, ಮಿದುಳು, ಬೆನ್ನಹುರಿ ಮತ್ತು ಅವುಗಳಿಂದ ದೇಹದ ನಾನಾಭಾಗಗಳಿಗೆ ಹೊರಡುವ ನರವ್ಯವಸ್ಥೆಯೂ ಇವೆ. ಇವುಗಳ ಸ್ಥೂಲರಚನೆ ಮತ್ತು ಕೆಲಸದ ರೀತಿ ಸಾಮಾನ್ಯವಾಗಿ ಮನುಷ್ಯದೇಹದಲ್ಲಿರುವಂತೆಯೇ. ನರಕಣಗಳ ಸಂವೇದನಾ ಶಕ್ತಿ, ಸಂವೇದನೆಗಳು ಮಿದುಳನ್ನು ಸೇರುವ ಬಗೆ ಹಾಗೂ ಮಿದುಳಿನಿಂದ ಬರುವ ಪ್ರತಿಕ್ರಿಯೆ ಚಲಿಸುವ ಕ್ರಮ ಎಲ್ಲವೂ ಮನುಷ್ಯರಲ್ಲಿರುವಂತೆಯೆ ಇರುವುದರಿಂದ ಕಪ್ಪೆಯನ್ನು ನರಸಂಬಂಧದ ಪ್ರಯೋಗಗಳಲ್ಲಿ ಬಳಸುತ್ತಾರೆ.

ಕಪ್ಪೆಯ ಮೂತ್ರ ವಿಸರ್ಜನೆಯ ಪ್ರಮುಖ ಅಂಗಗಳು ಉದ್ದುದ್ದನಾದ ಚಪ್ಪಟೆಯಾದ ಒಂದು ಜೊತೆ ಮೂತ್ರಜನಕಾಂಗಗಳು. ಇವು ಬೆನ್ನುಮೂಳೆಯ ಯೂರೋಪಸ್ಟೈಲಿನ ಎರಡು ಪಾಶರ್ವ್‌ಗಳಲ್ಲಿವೆ. ಇವುಗಳಿಂದ ಒಂದೊಂದು ಮೂತ್ರನಾಳ ಹೊರಟು ಕ್ಲೋಯಕ ರಂಧ್ರವನ್ನು ಸೇರುತ್ತವೆ.

ಕಪ್ಪೆಯಲ್ಲಿ ಲಿಂಗಗಳು ಭಿನ್ನವಾಗಿವೆ. ಗಂಡಿನಲ್ಲಿ ಒಂದು ಜೊತೆ ಹಳದಿ ಬಣ್ಣದ ಅಂಡಾಕಾರದ ವೃಷಣಗಳೂ ಅವುಗಳಿಂದ ಹೊರಡುವ ಎರಡು ವೀರ್ಯಾಣುನಾಳಗಳೂ ಇವೆ. ಈ ನಾಳಗಳು ಮೂತ್ರಜನಕಾಂಗದ ಮೂಲಕ ಸಾಗಿ ಮೂತ್ರನಾಳದೊಂದಿಗೆ ಸೇರುತ್ತವೆ. ಮೂತ್ರನಾಳಗಳು ಕ್ಲೋಯಕ ರಂಧ್ರದ ಮೂಲಕ ಹೊರಕ್ಕೆ ತೆರೆಯುತ್ತವೆ. ವೃಷಣಗಳಲ್ಲಿ ಉತ್ಪತ್ತಿಯಾದ ವೀರ್ಯಾಣುಗಳು ಮೂತ್ರನಾಳದ ಮೂಲಕವೇ ಹೊರ ಬರಬೇಕು. ಹೆಣ್ಣುಕಪ್ಪೆಯಲ್ಲಿ ಒಂದು ಜೊತೆ ಮಡಿಕೆಮಡಿಕೆಯಾದ ಅಂಡಾಶಯಗಳಿವೆ. ಅವುಗಳ ಬಳಿಯಲ್ಲಿ ಆದರೆ ಅವುಗಳೊಂದಿಗೆ ಸಂಬಂಧವಿರುವ ಓವಿಡಕ್ಟ್‌ ಎಂಬ ಎರಡು ನಾಳಗಳಿವೆ. ಇವುಗಳ ಒಂದು ತುದಿ ಆಲಿಕೆಯಂತಿದ್ದು ಇನ್ನೊಂದು ತುದಿ ಕ್ಲೋಯಕ ರಂಧ್ರದೊಳಕ್ಕೆ ತೆರೆಯುತ್ತದೆ. ಅಂಡಾಶಯಗಳಲ್ಲಿ ಉತ್ಪತ್ತಿಯಾದ ಅಂಡಾಣುಗಳು ಅಂಡಾಶಯಗಳ ಸುತ್ತ ಇರುವ ದೇಹಾವಕಾಶದೊಳಕ್ಕೆ ಬರುತ್ತವೆ. ಅಲ್ಲಿಂದ ಓವಿಡಕ್ಟ್‌ಗಳ ಆಲಿಕೆಯಂಥ ತುದಿಯ ಮುಖಾಂತರ ಅವು ಕ್ಲೋಯಕ ರಂಧ್ರಕ್ಕೆ ಬಂದು ಹೊರಬೀಳುತ್ತವೆ. ಮೊಟ್ಟೆಯಿಡುವುದರಲ್ಲಿ ಕಪ್ಪೆಗಳು ಮತ್ತು ನೆಲಗಪ್ಪೆಗಳು ವೈಶಿಷ್ಟ್ಯಪುರ್ಣವಾದ ನಡತೆಯನ್ನು ಪ್ರದರ್ಶಿಸುತ್ತವೆ. ಕಪ್ಪೆಗಳು ಅಕ್ರಮವಾದ ಕುಚ್ಚುಗಳ ರೀತಿಯಲ್ಲಿ ಮೊಟ್ಟೆಯನ್ನಿಟ್ಟರೆ ನೆಲಗಪ್ಪೆಗಳು ಮಣಿಸರದಂತೆ ಮೊಟ್ಟೆಯಿಡುತ್ತವೆ.  ಎಲ್ಲ ಕಪ್ಪೆಗಳಲ್ಲೂ ಗರ್ಭಾಂಕುರತೆ ದೇಹದ ಹೊರಗೆ ನಡೆಯುತ್ತದೆ. ಆ ಕಾಲದಲ್ಲಿ ಗಂಡುಕಪ್ಪೆ ಹೆಣ್ಣಿನ ಮೇಲೆ ಕೂತು ಅದನ್ನು ಬಲವಾಗಿ ಹಿಡಿದುಕೊಳ್ಳುತ್ತದೆ. ಆಗ ಹೆಣ್ಣು ಮೊಟ್ಟೆಗಳನ್ನು ತನ್ನ ವಿಶಿಷ್ಟರೀತಿಯಲ್ಲಿ ಹೊರಬಿಡುತ್ತದೆ. ಅನಂತರ ಗಂಡುಕಪ್ಪೆ ತನ್ನ ವೀರ್ಯಾಣುಗಳನ್ನು ಮೊಟ್ಟೆಗಳ ಮೇಲೆ ಸೇಚಿಸುತ್ತದೆ.  ಹೀಗೆ ಗರ್ಭಾಂಕುಗೊಂಡ ಮೊಟ್ಟೆಗಳು ನೀರಿನ ಮೇಲೆಯೇ ತೇಲುತ್ತಿದ್ದು ಅವುಗಳೊಳಗೆ ಭ್ರೂಣದ ಬೆಳೆವಣಿಗೆ ಸಾಗುತ್ತದೆ. ಕೆಲವು ದಿನಗಳ ಅನಂತರ ಮೊಟ್ಟೆಯಿಂದ ಪುಟ್ಟಮರಿಯೊಂದು ಹೊರಬಿದ್ದು ತನ್ನ ಉಳಿದ ಬೆಳೆವಣಿಗೆಯನ್ನು ಬಾಹ್ಯಪರಿಸರದಲ್ಲಿ ನಡೆಸುತ್ತದೆ. ಈ ಮರಿಯಲ್ಲಿ ದೊಡ್ಡ ತಲೆಯೂ ಕೊಳವೆಯಂಥ ಮುಂಡವೂ ಉದ್ದವಾದ ಬಾಲವೂ ಇವೆ. ಮುಂಡ ಮತ್ತು ತಲೆ ಸೇರುವಲ್ಲಿ ಎರಡು ಜೊತೆ ಕವಲೊಡೆದ ಹೊರಕಿವಿರುಗಳಿವೆ. ಈ ಮರಿಯನ್ನು ಗೊದಮೊಟ್ಟೆಯೆನ್ನುತ್ತಾರೆ. ತಲೆಯ ತುದಿಯಲ್ಲಿ ಅಗಲವಾದ ಬಾಯೊಂದು ಕಾಲಕ್ರಮೇಣ ಮೂಡುತ್ತದೆ. ಬಾಲದ ಸಹಾಯದಿಂದ ಈಜುವ ಈ ಮರಿ ಸಸ್ಯಾಹಾರಿ. ನೀರಿನಲ್ಲಿ ಬೆಳೆಯುವ ಸಣ್ಣಪುಟ್ಟ ಗಿಡಗಳನ್ನು ತಿಂದು ಜೀವಿಸುತ್ತದೆ. ನಿಧಾನವಾಗಿ ಹೊರಕಿವಿರುಗಳು ಮಾಯವಾಗಿ ತಲೆಯ ಎರಡೂ ಪಕ್ಕಗಳಲ್ಲಿ ಒಳಕಿವಿರುಗಳು ಹುಟ್ಟುತ್ತವೆ, ಬೆಳೆವಣಿಗೆ ಮುಂದುವರಿದಂತೆಲ್ಲ ಮುಂದಿನ ಮತ್ತು ಹಿಂದಿನ ಕಾಲುಗಳು ಹುಟ್ಟಿಕೊಳ್ಳುತ್ತವೆ. ದೇಹದ ಒಳಗೂ ಹಲವಾರು ಬದಲಾವಣೆಗಳು ಕಾಣಿಸಿಕೊಂಡು ಗೊದಮೊಟ್ಟೆ ಪ್ರೌಢಜೀವಿಯಾಗುತ್ತದೆ. ಶ್ವಾಸಾಂಗಗಳ ಹುಟ್ಟು, ಕಿವಿರುಗಳು ಮಾಯವಾಗುವಿಕೆ, ಬಾಲ ಚಿಕ್ಕದಾಗುವುದು-ಇವು ಈ ಕಾಲದ ಮುಖ್ಯ ಬದಲಾವಣೆಗಳು.

ಬಹುಪಾಲು ಕಪ್ಪೆಗಳಲ್ಲಿ ಸಂತಾನರಕ್ಷಣೆಯಿಲ್ಲವಾದರೂ ಕೆಲವು ಬಗೆಯ ಕಪ್ಪೆಗಳಲ್ಲಿ ಅದು ಉಚ್ಚಮಟ್ಟದ್ದಾಗಿದೆ. ಅಲೈಟಿಸ್ (ಸೂಲಗಿತ್ತಿ ಕಪ್ಪೆ) ಇದಕ್ಕೆ ಉತ್ತಮ ನಿದರ್ಶನ. ಇದರಲ್ಲಿ ಗಂಡುಕಪ್ಪೆ ಮೊಟ್ಟೆಗಳ ರಕ್ಷಣೆಯನ್ನು ನಿರ್ವಹಿಸುವುದು ಕಂಡುಬರುತ್ತದೆ. ವಸಂತಕಾಲದಲ್ಲಿ ಅನೇಕ ಗಂಡುಕಪ್ಪೆಗಳು ಒಂದೇ ಒಂದು ಹೆಣ್ಣು ಕಪ್ಪೆಯನ್ನು ಸುತ್ತುವರಿದು ಅದಕ್ಕಾಗಿ ಒಂದು ಸಮರವನ್ನೇ ನಡೆಸುತ್ತವೆ. ಯಶಸ್ವಿಯಾದ ಗಂಡು ಹೆಣ್ಣಿನಿಂದ ಹೊರಬಂದ ಮೊಟ್ಟೆಗಳ ಗರ್ಭಧಾರಣೆ ಮಾಡಿ, ಮೊಟ್ಟೆಗಳ ಕುಚ್ಚನ್ನು ತನ್ನ ಹಿಂಗಾಲುಗಳ ಸುತ್ತ ಸುತ್ತಿಕೊಂಡು ನೀರಿನಲ್ಲಿ ಈಜಲು ತೊಡಗುತ್ತದೆ. ಅನಂತರ ಯಾವುದಾದರೂ ಒಂದು ಬಿಲವನ್ನು ಸೇರಿ ಅಡಗಿಕೊಳ್ಳುತ್ತದೆ. ಕಾಲಾನುಕಾಲಕ್ಕೆ ಮೊಟ್ಟೆಗಳನ್ನು ಹೊರತಂದು ನೀರಿನಲ್ಲಿ ಮುಳುಗಿಸಿ ಅವು ಹಸಿಯಾಗಿರುವಂತೆ ಮಾಡುತ್ತಿರುತ್ತದೆ. ಈ ಕಾಲದಲ್ಲಿ ಮೊಟ್ಟೆಗಳಲ್ಲಿ ಭ್ರೂಣ ಬೆಳೆಯುತ್ತಿದ್ದು ಸಂಪುರ್ಣ ಬೆಳೆವಣಿಗೆಯಾದ ಮೇಲೆ ಗೊದಮೊಟ್ಟೆಗಳು ಹೊರಬರುತ್ತವೆ. ಇಲ್ಲಿಗೆ ಗಂಡುಕಪ್ಪೆಯ ಕೆಲಸ ಮುಗಿಯಿತು. ಹೈಲ ಜೋಲ್ಡಿ ಎಂಬ ಮರಗಪ್ಪೆಯಲ್ಲಿಯೂ ವಿಚಿತ್ರ ರೀತಿಯ ಸಂತಾನರಕ್ಷಣೆಯ ಕ್ರಮವಿರುವುದನ್ನು ಕಾಣಬಹುದು. ಇದರಲ್ಲಿ ಹೆಣ್ಣುಕಪ್ಪೆಯ ಬೆನ್ನಿನ ಮೇಲೆ ಒಂದು ಬಗೆಯ ಚೀಲವಿದೆ. ಗರ್ಭಧರಿಸಿದ ಮೊಟ್ಟೆಗಳನ್ನು ಈ ಚೀಲದೊಳಕ್ಕೆ ತುಂಬಿಕೊಂಡು ಅವು ಮರಿಯಾಗಿ ಹೊರಬರುವವರೆಗೂ ಪಾಲಿಸುತ್ತದೆ. ಇದೇ ಬಗೆಯ ಚೀಲವನ್ನು ಅಮೆರಿಕದ ಉಷ್ಣಪ್ರದೇಶಗಳಲ್ಲಿ ಕಾಣಬರುವ ಮಾರ್ಸೂಪಿಯಲ್ ನೆಲಗಪ್ಪೆಗಳಲ್ಲಿ (ನೋಟೋಟ್ರೀಮ) ನೋಡಬಹುದು. 

ಕಪ್ಪೆಗಳು ಪ್ರಪಂಚದ ಎಲ್ಲ ಪ್ರದೇಶಗಳಲ್ಲೂ ಕಾಣಬರುತ್ತವೆ. ದಕ್ಷಿಣಭಾರತದಲ್ಲಿ ಅನೇಕ ಜಾತಿಯ ಕಪ್ಪೆಗಳು ಸಿಕ್ಕುತ್ತವೆ. ಮುಖ್ಯವಾಗಿ ರಾನ ಎಂಬ ಜಾತಿಗೆ ಸೇರಿದ ಮೂರು ಪ್ರಭೇದಗಳು ಬಹು ಸಾಮಾನ್ಯ. ಇವು- 1. ರಾನ ಹೆಕ್ಸಡ್ಯಾಕ್ಟೈಲ (ಹಸಿರುಕಪ್ಪೆ)-ಇದರ ಹಿಂಗಾಲುಗಳಲ್ಲಿ ಅಂಕುರಾವಸ್ಥೆಯಲ್ಲಿರುವ ಆರನೆಯ ಬೆರಳಿರುವುದು ಇದರ ವೈಶಿಷ್ಟ್ಯ. 2.ರಾನ ಟೈಗ್ರಿನ (ಗೂಳಿಗಪ್ಪೆ), 3.ರಾನ ಸೈಯಾನೋಫ್ಲಿಕ್ಟಿಸ್ (ಬಿಳಿಯ ಕಪ್ಪೆ). ಇವುಗಳಲ್ಲಿ ಮೊದಲೆರಡು ಪ್ರಭೇದಗಳು ಆರ್ಥಿಕ ದೃಷ್ಟಿಯಿಂದ ಮುಖ್ಯವಾದುವು. ಇವುಗಳ ಹಿಂಗಾಲುಗಳು ಪಾಶ್ಚಾತ್ಯ ದೇಶಗಳಲ್ಲಿ ರುಚಿಕರ ಹಾಗೂ ಪ್ರಿಯವಾದ ಭಕ್ಷ್ಯವೆನಿಸಿದೆ. ಇವುಗಳ ರಫ್ತಿನಿಂದ ಭಾರತಕ್ಕೆ ಆವಶ್ಯಕವಾದ ವಿದೇಶೀ ವಿನಿಮಯದ ಗಳಿಕೆಯಾಗುತ್ತಿದೆ. ಬಿಳಿಯ ಕಪ್ಪೆಯನ್ನು ಪ್ರಾಯೋಗಿಕ ಪ್ರಾಣಿಯಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ರಾನ ಜಾತಿಯಲ್ಲದೆ ಬ್ಯೂಪೊ ಮೆಲನೋಸ್ಟಿಕ್ಟಸ್ ಎಂಬ ನೆಲಗಪ್ಪೆಯೂ ಯೂಪೆರೊಡಾನ್ ಸಿಸ್ಟೆಮ ಎಂಬ ಮರಳುಗಪ್ಪೆಯೂ ರಾಮನೆಲ್ಲ ಮೈಕ್ರೋಹೈಲ ಎಂಬ ಕಪ್ಪೆಯೂ ದಕ್ಷಿಣ ಭಾರತದಲ್ಲಿ ಹೇರಳವಾಗಿ ಕಾಣಬರುತ್ತವೆ. ಇವಲ್ಲದೆ ಯುರೋಪಿನಲ್ಲಿ ವಾಸಿಸುವ ಅಗ್ನಿಉದರದ ನೆಲಗಪ್ಪೆ (ನೋಡಿ- ಅಗ್ನಿ-ಉದರದ-ನೆಲಗಪ್ಪೆ) (ಫೈರ್ಬೆಲ್ಲೀಡ್ ಟೋಡ್) ಗಯಾನದಲ್ಲಿರುವ ಪೈಪ ಪೈಪ ಎಂಬ ಕಪ್ಪೆ. ಬೋರ್ನಿಯೊ ಮತ್ತು ಮಲಯಗಳಲ್ಲಿ ದೊರಕುವ ರ್ಯಾಕೊಫೋರಸ್ ಜಾತಿಯ ಹಾರುಗಪ್ಪೆ-ಇವು ಇನ್ನಿತರ ಮುಖ್ಯ ಬೆಯ ಕಪ್ಪೆಗಳು (ನೋಡಿ- ದ್ವಿಚರಿಗಳು-ಉಭಯವಾಸಿಗಳು).                                              (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ